ಅನುಗಮನ
	
ಆಧುನಿಕ ಪಾಶ್ಚಾತ್ಯ ತಾರ್ಕಿಕರು ತರ್ಕಶಾಸ್ತ್ರವನ್ನು ನಿಗಮನ (ಡಿಡಕ್ಷನ್) ಮತ್ತು ಅನುಗಮನ (ಇನ್‍ಡಕ್ಷನ್) ಎಂದು ಎರಡು ಭಾಗಗಳಾಗಿ ವಿಗಂಡಿಸುತ್ತಾರೆ. ನಮ್ಮ ತಿಳಿವಿಗೆ ಎರಡು ಬಗೆಯಾದ ನಡಿಗೆ ಅಥವಾ ಗಮನಗಳುಂಟು. ಪೃಥಕ್ಕಾದ, ಬಿಡಿಬಿಡಿಯಾದ ವಿಷಯಗಳನ್ನು ಸೂತ್ರಪ್ರಾಯವಾದ ಒಂದು ಸಾಮಾನ್ಯದಲ್ಲಿ ಒಂದುಗೂಡಿಸುವುದು ನಮ್ಮ ಜ್ಞಾನಕ್ರಿಯೆಯ ಒಂದು ಬಗೆಯ ನಡೆ. ಇದೇ ಅನುಗಮನ. ಹೀಗೆ ನಾವು ಬಿಡಿಬಿಡಿಯಾದ ವಿಷಯಗಳನ್ನು ಒಂದು ಸಾಮಾನ್ಯದ ಮೂಲಕ ಒಂದುಗೂಡಿಸಿದಾಗ ಪೃಥಕ್ಕಾದ ಎಲ್ಲ ವಿಷಯಗಳನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ. ಈ ಕಾರಣದಿಂದ ನಾವು ಏರ್ಪಡಿಸಿದ ಸಾಮಾನ್ಯ ಸ್ವಲ್ಪಮಟ್ಟಿಗೆ ಅವ್ಯಕ್ತವಾಗಿರುವುದು ಸಹಜ. ಈ ಲೋಪವನ್ನು ತಿದ್ದಿಕೊಳ್ಳಲು ಹೊಸಹೊಸದಾಗಿ ಗೋಚರವಾಗುವ ಅದೇ ವಿಧವಾದ ಬಿಡಿವಿಷಯಗಳಿಗೆ ನಾವು ಏರ್ಪಡಿಸಿಕೊಂಡಿದ್ದ ಸಾಮಾನ್ಯವನ್ನು ಅನ್ವಯಿಸಿ, ಅವುಗಳ ಮೂಲಕ ಆ ಸಾಮಾನ್ಯವನ್ನು ಒರೆಹಚ್ಚಿ ನೋಡಬೇಕಾಗುತ್ತದೆ. ಹೀಗೆ ಒರೆಹಚ್ಚಿ ನೋಡಿದಾಗ ಅವು ಆ ಸಾಮಾನ್ಯಕ್ಕೆ ಹೊಂದಿಕೆಯಾದರೆ ಆ ಸಾಮಾನ್ಯ ಹೆಚ್ಚುಮಟ್ಟಿಗೆ ವ್ಯಕ್ತವಾಗುತ್ತದೆ; ಸ್ಥಿರವಾಗುತ್ತದೆ. ಒಂದು ಪಕ್ಷ ಹಾಗೆ ಒರೆಹಚ್ಚಿ ನೋಡಿದಾಗ ಆ ಸಾಮಾನ್ಯ ಅವಕ್ಕೆ ಹೊಂದಿಕೆಯಾಗದಿದ್ದರೆ ಅದನ್ನು ಮಾರ್ಪಡಿಸಿ, ಅದು ಹೆಚ್ಚು ಪರಿಣಾಮಕಾರಿಯಾಗುವಂತೆ ಅದರ ಲಕ್ಷಣವನ್ನು ರೂಪಗೊಳಿಸುತ್ತೇವೆ. ಹೀಗೆ ಸಾಮಾನ್ಯವನ್ನು ವಿಶೇಷಗಳಿಗೆ ಅನ್ವಯಿಸುವ ವಿಧಾನವನ್ನು ನಿಗಮನ ಎನ್ನುತ್ತಾರೆ.
	
ಈ ಎರಡು ಬಗೆಯ ಆಲೋಚನೆಯ ಗಮನಗಳು ಭಿನ್ನವಲ್ಲ, ವಿರುದ್ಧವಲ್ಲ. ಅವೆರಡೂ ತಿಳಿವಿಗೆ ಅಗತ್ಯವಾದ, ಪರಸ್ಪರಪೂರಕವಾದ ಜ್ಞಾನವಿಧಾನಗಳು. ಒಂದನ್ನು ಬಿಟ್ಟು ಒಂದನ್ನೇ ಹೆಚ್ಚಾಗಿ ಬಳಸಿದರೆ ಜ್ಞಾನದ ಪ್ರಗತಿಗೆ ಅಡಚಣೆಯುಂಟಾಗುತ್ತದೆ. ಅಂಥ ಸಂದರ್ಭ, ಪಾಶ್ಚಾತ್ಯ ದೇಶಗಳಲ್ಲೂ ಭಾರತದಲ್ಲೂ ಒದಗಿತ್ತು. ಕ್ರಿಸ್ತಶಕದ ಆದಿಯಿಂದ ಹದಿನೈದನೆಯ ಶತಮಾನದವರೆಗೆ ಯೂರೋಪಿನಲ್ಲಿ ವಿಶೇಷವಾಗಿ ಬಳಕೆಯಲ್ಲಿದ್ದುದು ನಿಗಮನತರ್ಕವೊಂದೇ. ಅದಕ್ಕೆ ಜಾರಿತ್ರಿಕ ಕಾರಣಗಳುಂಟು. ಆ ಕಾಲದಲ್ಲಿ ತಾರ್ಕಿಕರು ವಿಶೇಷವಾಗಿ ಅರಿಸ್ಪಾಟಲನ ತರ್ಕವನ್ನೇ ಆದರ್ಶವಾಗಿಟ್ಟುಕೊಂಡಿದ್ದರು. ಆತ ತನ್ನ ತರ್ಕಗ್ರಂಥದಲ್ಲಿ ವಿಶೇಷವಾಗಿ ನಿಗಮನತರ್ಕಕ್ಕೆ ಪ್ರಾಶಸ್ತ್ಯಕೊಟ್ಟಿದ್ದ. ಅನುಗಮನತರ್ಕವಿಧಾನವನ್ನು ಸ್ವಲ್ಪಮಟ್ಟಿಗೆ ಸೂಚಿಸಿದ್ದನಾದರೂ ಅದನ್ನು ಮಧ್ಯಯುಗದ ಯೂರೋಪಿನ ತಾರ್ಕಿಕರು ಲಕ್ಷಿಸದೆ ಅವನ ನಿಗಮನತರ್ಕವನ್ನು ಮಾತ್ರ ಆಶ್ರಿಯಿಸಿದರು. ಹೊಸ ಹೊಸ ವಿಷಯಗಳನ್ನು ತಿಳಿಯಬೇಕೆಂಬ ಕೂತೂಹಲವಿಲ್ಲದ್ದರಿಂದ ಅವರಿಗೆ ಅನುಗಮನತರ್ಕ ಅಗತ್ಯವಾಗಿ ತೋರಲಿಲ್ಲ. ಅದರ ಪರಿಣಾಮವಾಗಿ ಅವರ ಜ್ಞಾನ-ಮುಖ್ಯವಾಗಿ ಪ್ರಕೃತಿಗೆ ಸಂಬಂಧಿಸಿದ-ಜ್ಞಾನ, ಬೆಳೆಯದೆ ದೀರ್ಘಕಾಲ ಅವರು ಅಂಧಕಾರದಲ್ಲಿ ಮುಳುಗಿದ್ದರು. 
	
ಭಾರತದಲ್ಲಿ ತಾರ್ಕಿಕರು ಬಹಳ ಹಿಂದಿನ ಕಾಲದಲ್ಲೇ ಅನುಗಮನ ನಿಗಮನಗಳು ಒಂದನ್ನೊಂದು ಎಡೆಬಿಡದ ಪ್ರಕ್ರಿಯೆಗಳೆಂದು ತಿಳಿದಿದ್ದರು. ಅವರ ಪಂಚಾವಯವ ಅನುಮಾನ ವಾಕ್ಯದಲ್ಲಿ ಮಧ್ಯದ ಅವಯವದಲ್ಲಿ ಅನುಗಮನಕ್ರಿಯೆ ಅಡಗಿತ್ತು. ಅನುಮಾನವಾಕ್ಯ ಪೂರ್ಣವಾಗಲು ಅದಕ್ಕೆ ನಿಗಮನದಷ್ಟೇ ಅನುಗಮನವೂ ಅಗತ್ಯವೆಂದು ಸ್ಟಷ್ಟವಾಗಿ ತಿಳಿಸಿದ್ದರು. ಆದರೆ ಮಧ್ಯಯುಗದ ಪಾಶ್ಚಾತ್ಯರಂತೆ ಭಾರತೀಯರಿಗೂ ಮುಖ್ಯವಾಗಿ ಕ್ರಿ.ಶ. 10ನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಹೊಸ ವಿಷಯಗಳನ್ನು ಕಂಡುಹಿಡಿಯುವ ಕುತೂಹಲವಿರಲಿಲ್ಲ. ಆದ್ದರಿಂದ ಅವರು ಅನುಗಮನಕ್ರಿಯೆಯ ಬಹುರೂಪಗಳನ್ನು ವಿಸ್ತರಿಸದೆ ತರ್ಕಶಾಸ್ತ್ರವನ್ನು ಕುಂಠಿತಗೊಳಿಸಿದರು. ಕ್ರಿ.ಶ. 16ನೆಯ ಶತಮಾನದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನಶ್ರದ್ಧೆ ಹುಟ್ಟಿದಾಗ ಅನುಗಮನ ನ್ಯಾಯದ ಅಗತ್ಯ ಅವರಿಗೆ ಮನುವರಿಕೆಯಾಯಿತು. ಈ ಕಾಲದಲ್ಲಿದ ಬೇಕನ್ ಎಂಬ ವಿಜ್ಞಾನಪ್ರೇಮಿ, ಗೆಲಿಲಿಯೊ ಮುಂತಾದ ವೈಜ್ಞಾನಿಕರು ಅನುಸರಿಸಿದ ಅನುಗಮನತರ್ಕವಿಧಾನಕ್ಕೆ ಇಂಡಕ್ಷನ್ ಎಂಬ ಹೆಸರುಕೊಟ್ಟು ಅದನ್ನು ಸ್ವಲ್ಪಮಟ್ಟಿಗೆ ವಿವರಿಸಿದರು.
	
ಬೇಕನ್ ವಿವರಿಸಿರುವ ಅನುಗಮನತರ್ಕವಿಧಾನ ತುಂಬ ಸರಳವಾದದ್ದು ಅವನು ಮುಖ್ಯವಾಗಿ ಒತ್ತಿಹೇಳಿದ್ದು ಇದು. ಪ್ರಕೃತಿಯ ಸತ್ಯವನ್ನು ತಿಳಿಯಬೇಕಾದರೆ ನಾವು ಎಲ್ಲ ಬಗೆಯ ಪೂರ್ವಕಲ್ಪನೆಗಳನ್ನೂ ಬದಿಗಿಟ್ಟು ಪ್ರಕೃತಿಯ ಒಂದೊಂದು ಅಂಶವನ್ನು ಕಣ್ಣಿಟ್ಟುನೋಡಬೇಕು. ಸ್ಪಷ್ಟವಾಗಿ ಕಂಡ ವಿಷಯಗಳನ್ನು ತದ್ವತ್ತಾಗಿ ನಿಷ್ಕøಷ್ಟವಾಗಿ ಕರಾರುವಾಕ್ಕಾಗಿ ವರ್ಣಿಸಬೇಕು. ಕಂಡದ್ದರಲ್ಲಿ ಯಾವುದನ್ನೂ ನಮ್ಮ ಮತ ಭಾವನೆಗಳಿಗೆ ವಿರುದ್ಧವೆಂದು ಕೈಬಿಡಬಾರದು; ಹೀಗಿದ್ದರೆ ಚೆನ್ನು ಎಂದು ನಮ್ಮ ಅಭಿಮಾನಗಳಿಗೆ ವಶರಾಗಿ ನಮಗೆ ಮೆಚ್ಚಿಕೆಯಾದುದನ್ನು ಆರೋಪಿಸಲೂಬಾರದು; ಹಾಗೆ ಮಾಡಿದಾಗ ಕಂಡ ವಿಷಯವನ್ನು ವಿರೂಪಗೊಳಸಿ ಸತ್ಯದಿಂದ ವಿಮುಖರಾಗುತ್ತೇವೆ. ವಾಸ್ತವವಾಗಿ ಕಂಡ ವಿಷಯ ವಿರೂಪಗೊಳಿಸಿ ಸತ್ಯದಿಂದ ವಿಮುಖರಾಗುತ್ತೇವೆ. ವಾಸ್ತವವಾಗಿ ಕಂಡ ವಿಷಯಗಳಲ್ಲಿ ಇರಬಹುದಾದ ಸಾಮಾನ್ಯಲಕ್ಷಣಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಅವುಗಳ ಆಧಾರದ ಮೇಲೆ ಪ್ರಕೃತಿಯ ನಿಯಮಗಳನ್ನು ಸ್ಪಷ್ಟವಾಗಿ ನಿರೂಪಣೆಮಾಡಬೇಕು. ಬೇಕನ್ ನಿಯಮನಿರೂಪಣೆಗೆ ವಿಷಯಗಳ ಎಣಿಕೆಯನ್ನು (ಎನ್ಯೂಮರೇಷನ್) ಆಧಾರವಾಗಿಟ್ಟುಕೊಂಡ ಸಾಮ್ಯವಿರುವ ವಿಷಯಗಳ ಸಂಖ್ಯೆ ಹೆಚ್ಚಿದಷ್ಟೂ ನಿಯಮ ನಿರೂಪಣೆಯೂ ಹೆಚ್ಚು ಪ್ರಬಲವಾಗುತ್ತದೆ. ಎಂದು ಇವನ ಮತ.
	
ದೃಷ್ಟಾಂತಗಳ ಎಣಿಕೆಯನ್ನು ಮಾತ್ರ ಆಶ್ರಯಿಸುವುದು ಉತ್ತಮಮಾರ್ಗವಲ್ಲ. ಕೇವಲ ಎಣಿಕೆಯ ಮೇಲೆ ರೂಪಿಸಿದ ನಿಯಮ ಭದ್ರವಲ್ಲ. ಅದಕ್ಕೆ ಆಧಾರವಾಗಿ ನಾವು ಸಂಗ್ರಹಿಸಿದ ಸಾವಿರ ವಿಷಯಗಳಲ್ಲಿ ಸಾಮ್ಯವಿರಬಹುದು. ಆದರೆ ವಿರುದ್ಧವಾದ ಒಂದು ವಿಷಯ ಕಾಣಿಸಿಕೊಂಡಾಗ ಅದು ಉರುಳಿ ಬೀಳುತ್ತದೆ. ಅಲ್ಲದೆ ಕೇವಲ ಅವೇಕ್ಷಣ (ಅಬ್ಸರ್‍ವೇಷನ್) ಕೂಡ ಹೆಚ್ಚು ಪರಿಣಾಮಕಾರಿಯಲ್ಲ. ಕಂಡ ವಿಷಯವನ್ನು ವಿಶ್ಲೇಷಿಸಿ (ಅನಲೈಸ್) ನೋಡಿದಾಗ ಅದರ ಮರ್ಮ ತೆರೆದು ಕಾಣುತ್ತದೆ. ವಿಶ್ಲೇಷಣೆಯಿಂದ ನಾವು ವಿಷಯವನ್ನು ಒಳಹೊಕ್ಕು ನೋಡಲು ಸಾಧ್ಯವಾಗುತ್ತದೆ. ನಾವು ತಿಳಿಯಬೇಕೆಂದಿರುವ ಸತ್ಯಕ್ಕೆ ಯಾವ ಅಂಶ ನೇರವಾಗಿ ಸಂಬಂಧಿಸಿದುದು ಯಾವುದು ಆಗಂತುಕ ಎಂಬುದನ್ನು ತಿಳಿಯಲು ವಿಶ್ಲೇಷಣೆ ನೆರವಾಗುತ್ತದೆ. ಈ ವಿಶೇಷಣದ ಅಗತ್ಯತೆಯನ್ನು ಬೇಕನ್ ಸ್ಪಷ್ಟವಾಗಿ ತಿಳಿಯಲಿಲ್ಲ. ಇದಕ್ಕಿಂತ ಇನ್ನೂ ಫಲಕಾರಿಯಾದ ವಿಧಾನ, ಕಲ್ಪನೆಯ ವಿಧಾನ (ಮೆಥಡ್ ಆಫ್ ಹೈಪಾಥಿಸಿಸ್). ಇದಕ್ಕೆ ಪ್ರತಿಭೆ ಅಗತ್ಯ. ವಿಷಯಗಳನ್ನು ಕೂಡಿಹಾಕಬಹುದು. ವಿಶ್ಲೇಷಿಸಬಹುದು. ಆದರೆ ಅವುಗಳಲ್ಲಿ ಅಡಗಿರುವ ಮರ್ಮವನ್ನು ತಿಳಿಯಬೇಕಾದರೆ ಊಹೆ ಮಾಡಬಲ್ಲ ಶಕ್ತಿಬೇಕು. ಅಂಥ ಊಹಾಶಕ್ತಿ ಇದ್ದುದರಿಂದಲೇ ನ್ಯೂಟನ್ ಭೂಮಿಯ ಚಲನವನ್ನೂ ಆಕಾಶದಲ್ಲಿರುವ ಗ್ರಹಗಳ ಚಲನವನ್ನೂ ತನ್ನ ಪ್ರತಿಭೆಯ ಬಲದಿಂದ ಸೂತ್ರಿಸಿ ಗರುತ್ವಾಕರ್ಷಣ ಕಲ್ಪನೆಯನ್ನು ಏರ್ಪಡಿಸಿಕೊಂಡ. ಕಲ್ಪನೆ ಬರಿಯ ಕಲ್ಪನೆಯಾಗಿಯೇ ಉಳಿದರೆ ಅದಕ್ಕೆ ಅಷ್ಟು ಬಲವಿಲ್ಲ. ಅದು ಫಲಕಾರಿಯಾದ ಕಲ್ಪನೆಯಾಗಬೆಕು. ಅದನ್ನಾಶ್ರಯಿಸಿದಾಗ ವಿಷಯಗಳಲ್ಲಿ ಹೆಚ್ಚು ಹೆಚ್ಚಿನ ಸಾಂಗತ್ಯ ತೋರಬೇಕು. ಅದಕ್ಕಿಂತ ಮುಖ್ಯವಾಗಿ ವಿಷಯದ ಒರೆಗಲ್ಲಿಗೆ ಹಚ್ಚಿದಾಗ, ಪ್ರಯೋಗ ನಡೆಸಿದಾಗ ಅದು ವಾಸ್ತವಕ್ಕೆ ಸರಿತೂಗಬೇಕು. ಅನುಗಮನತರ್ಕಕ್ಕೆ ಸಂಬಂಧಪಟ್ಟ ಈ ಅಂಶಗಳಿಗೆ ಬೇಕನ್ ಗಮನಕೊಡಲಿಲ್ಲ.
	
ಈ ಎಲ್ಲ ಅಂಶಗಳಿಗೆ ಗಮನಕೊಟ್ಟು ಅನುಗಮನತರ್ಕವನ್ನು ಬೆಳೆಸಿದವನು ಜಾನ್ ಸ್ಟೂಅರ್ಟ್ ಮಿಲ್ ಎಂಬ ಆಂಗ್ಲೇಯ ತಾರ್ಕಿಕ. ಅವನು ಅನುಗಮನತರ್ಕವನ್ನು ವಿಸ್ತರಿಸಲು ಅನುಕೂಲವಾದುದಕ್ಕೆ ಭೌತ ಮತ್ತು ರಾಸಾಯನಿಕ ವಿಜ್ಞಾನದಲ್ಲಿ ಅವನ ಕಾಲಕ್ಕಾಗಲೇ ಆಗಿದ್ದ ಪ್ರಗತಿ ಮುಖ್ಯಕಾರಣ. ಪಾಶ್ಚಾತ್ಯರಲ್ಲಿ ಮೊಟ್ಟಮೊದಲಾಗಿ ಅನುಗಮನ ನಿಗಮನವೆರಡನ್ನೂ ಒಳಗೊಂಡ ತರ್ಕಶಾಸ್ತ್ರವನ್ನು ನಿರ್ಮಿಸಿದ ಖ್ಯಾತಿ ಅವನಿಗೆ ಸಲ್ಲುತ್ತದೆ. ಅವನ ನಿಗಮನ ಅನುಗಮನ ತರ್ಕದ ಮುಖ್ಯ ವಿಧಾನಗಳು ಎರಡು: 1 ಅನುಗಮನಕ್ಕೆ ಪೂರ್ವಿಯಾವ ನಿಗಮನವಿಧಾನ, 2 ನಿಗಮನಕ್ಕೆ ಪೂರ್ವಿಯಾದ ಅನುಗಮನವಿಧಾನ. ಮೊದಲನೆಯದನ್ನು ಭೌತವಿಧಾನವೆಂದೂ ಎರಡನೆಯದನ್ನು ಜಾರಿತ್ರಿಕ ವಿಧಾನವೆಂದೂ ಕರೆದಿದ್ದಾನೆ. ಈ ಹೆಸರುಗಳೂ ವಿಂಗಡನೆಯೂ ಅಷ್ಟೇನೂ ಸಮರ್ಪಕವಾದುದಲ್ಲ. ಏಕೆಂದರೆ ಭೌತವಿಜ್ಞಾನದಲ್ಲಿ ಅವನು ಹೇಳಿರುವ ಎರಡು ವಿಧಾನಗಳೂ ಪರಸ್ಪರ ಸಹಕಾರಿಗಳಾಗಿ ಬಳಕೆಯಾಗಿವೆ.
	
ವಿಷಯದ ಅವೇಕ್ಷಣ, ಸಂಗ್ರಹಣ, ವಿಶ್ಲೇಷಣಗಳ ಮೂಲಕ ಅಗತ್ಯವಾದ ಅಂಶಗಳಿಂದ ಅನಗತ್ಯವಾದ ಅಂಶಗಳ ಪೃಥಕ್ಕರಣ, ವಿಷಯಗಳನ್ನು ಒಂದುಗೂಡಿಸುವ ಭಾವನೆಯ ಊಹೆ, ನಿಗಮನದಿಂದ ವಿಸ್ತರಿಸಿ, ಊಹೆಯನ್ನು ಪ್ರಯೋಗದಿಂದ ರುಜುವಾತುಮಾಡುವುದು-ಇವು ಅನುಗಮನತರ್ಕದ ವಿವಿಧ ಪರಸ್ಪರ ಪೂರಕ ಮಾರ್ಗಗಳು. ಈ ಮಾರ್ಗಗಳನ್ನು ಬಿಡಿಬಿಡಿಯಾಗಿ ಅಥವಾ ಅವುಗಳಲ್ಲಿ ಎರಡನ್ನೂ ಸೇರಿಸಿ ಅಥವಾ ಎಲ್ಲವನ್ನೂ ಸೇರಿಸಿ ಯಾವಸಂದರ್ಭದಲ್ಲಿ ಹೇಗೆ ಉಪಯೋಗಿಸಿ ಕೊಳ್ಳಬಹುದೆಂಬುದು ಅನುಗಮನದ ಒಂದು ಮುಖ್ಯಪ್ರಶ್ನೆ.
	
ಇದಕ್ಕೆ ಉತ್ತರವಾಗಿ ಮಿಲ್ ಐದು ವಿಧಾನಗಳನ್ನು ಸೂಚಿಸಿದ್ದಾನೆ : 1 ಸಪಕ್ಷ ವಿಧಾನ (ಮೆಥಡ್ ಆಫ್ ಅಗ್ರಿಮೆಂಟ್) ; 2 ವ್ಯತ್ಯಾಸವಿಧಾನ (ಮೆಥಡ್ ಆಫ್ ಡಿಫರೆನ್ಸ್) 3 ಸಪಕ್ಷ ಮತ್ತು ವಿಪಕ್ಷಗಳ ಜೋಡಣೆ ವಿಧಾನ (ಜಾಯಿಂಟ್ ಮೆಥಡ್ ಆಫ್ ಅಗ್ರಿಮೆಂಟ್ ಆ್ಯಂಡ್ ಡಿಪರೆನ್ಸ್); 4 ಸಂಗಾಮಿವ್ಯತ್ಯಯಗಳ ವಿಧಾನ (ಮೆಥಡ್ ಆಫ್ ಕನ್‍ಕಾಮಿಟೆಂಟ್ ವೇರಿಯೇಷನ್) ; 5 ಶೇಷವಿಧಾನ (ಮೆಥಡ್ ಆಫ್ ರೆಸಿಡ್ಯೂಸ್): ಇವನ್ನು ಕಾರ್ಯಕಾರಣ ಸಂಬಂಧಗಳನ್ನು ನಿರ್ಧರಿಸುವ ವಿಧಾನಗಳೆಂದು ಕರೆಯುವುದುಂಟು.'
	
ಅವೇಕ್ಷಣ ಮತ್ತು ವಿಷಯ ಸಂಗ್ರಹಣಗಳೆರಡನ್ನೂ ಸ್ವಲ್ಪಮಟ್ಟಿಗೆ ವಿಭಜನಮಾರ್ಗವನ್ನೂ ಮಿಲ್ ತನ್ನ ಸಪಕ್ಷವಿಧಾನದಲ್ಲಿ ಉಪಯೋಗಿಸಿಕೊಂಡಿದ್ದಾನೆ. ಜೊತೆಗೆ ವಿಭಜನವಿಧಾನ, ಪ್ರಾಯೋಗವಿಧಾನಗಳನ್ನು ವ್ಯತ್ಯಾಸದ ವಿಧಾನದಲ್ಲೂ ಸಂಗಾಮಿ ವ್ಯತ್ಯಯಗಳ ವಿಧಾನದಲ್ಲೂ ಉಪಯೋಗಿಸಿಕೊಂಡಿರುತ್ತಾನೆ. ಆದರೆ ಊಹೆಯ ವಿಧಾನವನ್ನು ಆತ ಉಪಯೋಗಿಸಿಕೊಂಡಿಲ್ಲ.
	
ಸಪಕ್ಷವಿಧಾನಕ್ಕೆ ಒಂದು ಉದಾಹರಣೆ: ಒಂದು ಊರಿನಲ್ಲಿ ವಿಷಮಶೀತಜ್ವರ ಹುಟ್ಟಿತೆಂದಿಟ್ಟುಕೊಳ್ಳೋಣ. ಇದು ಹುಟ್ಟಲು ಕಾರಣವೇನೆಂಬುದನ್ನು ಆ ಊರಿನ ಪುರಸಭೆಯವರು ಪತ್ತೆಮಾಡಬೇಕಾಗುತ್ತದೆ. ಜ್ವರ ಹತ್ತು ಜನರಿಗೆ ಬಂದಿದ್ದರೆ ಅವರೆಲ್ಲರೂ ಒಂದೇ ಬಾವಿಯ ನೀರನ್ನೂ ಒಬ್ಬನೇ ಗೌಳಿಗ ಕೊಟ್ಟ ಹಾಲನ್ನೊ ಕುಡಿದದ್ದು ಅಥವಾ ಒಂದೇ ಅಂಗಡಿಯಿಂದ ಕೊಂಡ ತರಕಾರಿಯನ್ನು ತಿಂದದ್ದು ಕಾರಣವಾಗರಿಬಹುದು. ಇವುಗಳಲ್ಲಿ ನಿಜವಾಗಿ ಯಾವುದು ಕಾರಣ ? ಹತ್ತು ಜನಕ್ಕೂ ಸಮಾನವಾದ ಅಂಶ ಯಾವುದು ಎಂಬುದನ್ನು ಕಂಡುಹಿಡಿದಿದ್ದರೆ ಅದು ಜ್ವರಕ್ಕೆ ಕಾರಣವೆಂದು ಹೇಳಬಹುದು. ಹತ್ತು ಜನರೂ ಒಬ್ಬನೇ ಗೌಳಿಗೆ ಕೊಟ್ಟ ಹಾಲನ್ನು ಸೇವಿಸಿದ್ದರೆ ಬಹುಶಃ ಅದು ಅದಕ್ಕೆ ಕಾರಣವಾಗಬಲ್ಲುದು.
	
ಆದರೆ ಇದು ನಿರ್ದುಷ್ಟವಾದ ವಿಧಾನವಲ್ಲ. ಹತ್ತು ಜನ ಒಬ್ಬ ಗೌಳಿಗನ ಹಾಲನ್ನು ಕುಡಿದಿದ್ದರೂ ಅದೇ ಆ ಜ್ವರಕ್ಕೆ ಕಾರಣವೆಂದು ನಿರ್ದುಷ್ಟವಾಗಿ ಹೇಳಲಾಗುವುದಿಲ್ಲ. ಅದಕ್ಕಿಂತ ಬೇರೆ ಕಾರಣವಿರಬಹುದು. ಹಾಲಿಗೆ ಸೇರಿಸಿದ ನೀರು ಕಾರಣವಿರಬಹುದು. ಈ ವಿಧಾನದಲ್ಲಿರುವ ದೌರ್ಬಲ್ಯವನ್ನು ಪರಿಹರಿಸಲು ಎರಡು ಮಾರ್ಗಗಳು ಇವೆ. ವಿಪಕ್ಷದೃಷ್ಟಾಂತಗಳನ್ನು ಪರಿಶೀಲಿಸುವುದು. ವಿಪಕ್ಷದೃಷ್ಟಾಂತಗಳೆಂದರೆ ಕಾಯಿಲೆಗೆ ಒಳಗಾಗದವರೆಲ್ಲರೂ ಸೇವಿಸಿದ ಪದಾರ್ಥಗಳನ್ನು ಪರಿಶೀಲಿಸುವುದು. ಜ್ವರಬಾರದೇ ಇರುವುವವರಲ್ಲಿ ಯಾರೊಬ್ಬರೂ ಆ ಗೌಳಿಗ ಕೊಟ್ಟ ಹಾಲನ್ನು ಕುಡಿಯದವರಾಗಿದ್ದರೆ ಆಗ ಹಾಲೇ ಕಾರಣವೆಂಬುದು ಹೆಚ್ಚು ದೃಢವಾಗುತ್ತದೆ. ಹೀಗೆ ಸಪಕ್ಷದೃಷ್ಟಾಂತಗಳ ಜೊತೆಯಲ್ಲಿ ವಿಪಕ್ಷ ದೃಷ್ಟಾಂತಗಳನ್ನೂ ಪರಿಶೀಲಿಸಿ ಒಂದು ಅಂಶ ಸಪಕ್ಷದೃಷ್ಟಾಂತಗಳೇ ಇದರಲ್ಲೂ ಇದ್ದುದಾಗಿ, ವಿಪಕ್ಷದೃಷ್ಟಾಂತಗಳಲ್ಲೆಲ್ಲ ಇಲ್ಲದಾಗಿ ತಿಳಿದಾಗ ಸಪಕ್ಷವಿಧಾನಕ್ಕೆ ವಿಪಕ್ಷವಿಧಾನದ ಬೆಂಬಲ ದೊರೆತು ಅದು ಬಲಗೊಳ್ಳುತ್ತದೆ. ಅದಕ್ಕಿಂತ ಹೆಚ್ಚು ದೃಢವಾಗಬೇಕಾದರೆ, ವ್ಯತ್ಯಾಸವಿಧಾನವನ್ನು ಅನುಸರಿಸಬೇಕು. ಪ್ರಯೋಗವೇ ಈ ವಿಧಾನಕ್ಕೆ ಇರುವ ಬಲ. ಉರಿಯುವುದಕ್ಕೆ ಆಮ್ಲಜನಕ ಕಾರಣ ಎಂದು ನಿರ್ದಿಷ್ಟವಾಗಿ ಹೇಳಬೇಕಾದರೆ ಒಂದೇ ಒಂದು ಪ್ರಯೋಗ ಸಾಕು. ಆಮ್ಲಜನಕವಿರುವ ಜಾಡಿಯಲ್ಲಿ ದೀಪವಿಟ್ಟರೆ ಉರಿಯುತ್ತದೆ. ಆಮ್ಲಜನಕವಿಲ್ಲದ ಜಾಡಿಯಲ್ಲಿ ದೀಪವಿಟ್ಟರೆ ಆರಿಹೋಗುತ್ತದೆ. ಈ ವ್ಯತ್ಯಾಸವನ್ನು ಪ್ರಾಯೋಗಿಕವಾಗಿ ತೋರಿಸಿದಾಗ ಸಂಶಯಕ್ಕೆ ಅವಕಾಶವಿಲ್ಲವಾಗುತ್ತದೆ. ಆದ್ದರಿಂದ ವ್ಯತ್ಯಾಸವಿಧಾನ ಸಪಕ್ಷವಿಧಾನಕ್ಕಿಂತ ಪ್ರಬಲವಾದದ್ದು.
	
ಸಂಗಾಮಿವ್ಯತ್ಯಯಗಳ ವಿಧಾನದಿಂದ ಕಾರ್ಯಕಾರಣದ ಸಂಬಂಧ ಇನ್ನೂ ಹೆಚ್ಚು ನಿರ್ದಿಷ್ಟವಾಗುತ್ತದೆ. ಅದರ ಮೂಲಕ ಕಾರಣದ ಪ್ರಮಾಣಕ್ಕೂ ಕಾರ್ಯದ ಪ್ರಮಾಣಕ್ಕೂ ಸಂಬಂಧವೇರ್ಪಡಿಸಬಹುದು. ಕಾರಣಾಂಶದ ಪ್ರಮಾಣ ಕಡಿಮೆ ಮಾಡಿದರೆ ಕಾರ್ಯದ ಪ್ರಮಾಣ ಅದೇ ಪ್ರಮಾಣದಲ್ಲಿ ಬದಲಾಯಿಸಿದರೆ ಅವೆರಡಕ್ಕಿರುವ ಸಂಬಂಧ ತುಂಬ ಖಚಿತವಾಗುತ್ತದೆ. ಸಂಗಾಮಿವ್ಯತ್ಯಯ ವಿಧಾನಕ್ಕೆ ಬಾಯಿಲ್ ಎಂಬ ಭೌತವಿಜ್ಞಾನಿ ನಡೆಸಿದ ಒಂದು ಪ್ರಯೋಗ ಒಳ್ಳೆಯ ಉದಾಹರಣೆ. ವಾಯುಮಾಪಕದ ಸಹಾಯದಿಂದ ವಾಯುವಿನ ಒತ್ತಡವನ್ನು ಅಳತೆ ಮಾಡುವುದರ ಮೂಲಕ ಬೆಟ್ಟಗಳ ಎತ್ತರನ್ನು ಅಳೆಯಲು ಅವನು ಪ್ರಯತ್ನಿಸಿದ. ಅದರಂತೆ ಕಾರಣವಾದ ವಾಯುವಿನ ಪ್ರಮಾಣದಲ್ಲಿ ವ್ಯತ್ಯಾಸವಾದರೆ ತತ್ಪರಿಣಾಮವಾಗಿ ಕಾರ್ಯವಾದ ವಾಯುಮಾಪಕ ಯಂತ್ರ ಪಾದರಸದ ಏರಿಳಿತದಲ್ಲಿ ವ್ಯತ್ಯಾಸವಾಗುತ್ತದೆಂಬುದನ್ನು ತೋರಿಸಿಕೊಟ್ಟ. ಸಮುದ್ರಮಟ್ಟದಲ್ಲಿ ವಾಯುವಿನ ಒತ್ತಡದ ಪ್ರಮಾಣ ಹೆಚ್ಚು. ಆದ್ದರಿಂದ ವಾಯುಮಾಪಕ ಯಂತ್ರದಲ್ಲಿ ಪಾದರಸದ ಮಟ್ಟ 30 ಎತ್ತರಕ್ಕೆ ಏರಿ ನಿಲ್ಲುತ್ತದೆ. ಮೂರುಸಾವಿಕ ಅಡಿಗಳಷ್ಟು ಎತ್ತರವಿರುವ ಬೆಟ್ಟದ ತುದಿಯಲ್ಲಿ ವಾಯುವಿನ ಒತ್ತಡ ಆ ಎತ್ತರಕ್ಕೆ ಅನುಸಾರವಾಗಿ ಕಡಿಮೆ. ಒಂದೊಂದು ಸಾವಿರ ಅಡಿ ಮೇಲಮೇಲಕ್ಕೆ ಹೋದಂತೆಲ್ಲ ವಾಯುಮಾಪಕ ಯಂತ್ರದಲ್ಲಿರುವ ಪಾದರಸದ ಮಟ್ಟ ಒಂದೊಂದು ಅಂಗುಲ ಇಳಿಯುತ್ತದೆ. ಬಾಯಿಲ್ ಸಮುದ್ರಮಟ್ಟದಿಂದ ವಾಯುಮಾಪಕಯಂತ್ರವನ್ನು 1000 ಎತ್ತರಕ್ಕೆ ತೆಗೆದುಕೊಂಡು ಹೋದಾಗ ಪಾದರಸದ ಮಟ್ಟ ಒಂದು ಅಂಗುಲದಷ್ಟು ಇಳಿಯಿತು. ಮೂರು ಸಾವಿರ ಅಡಿ ಇತ್ತರಕ್ಕೆ ತೆಗೆದುಕೊಂಡು ಹೋದಾಗ ಮೂರಂಗುಲದಷ್ಟು ಇಳಿಯಿತು. ಇಲ್ಲಿ ಉಪಯೋಗವಾಗಿರುವುದು ಸಂಗಾಮಿವ್ಯತ್ಯಯಗಳ ವಿಧಾನ.
	
ಮೇಲಿನ ಉದಾಹರಣೆಯಲ್ಲಿ ಸಂಗಾಮಿವ್ಯತ್ಯಯಗಳ ವಿಧಾನ ಪ್ರಯೋಗಸಹಿತವಾಗಿದೆ. ಆದರೆ ಈ ವಿಧಾನಕ್ಕೆ ಪ್ರಯೋಗಿಕ ನೆರವಿದ್ದೇ ಇರಬೇಕೆಂಬ ನಿರ್ಬಂಧವಿಲ್ಲ. ಪ್ರಯೋಗ ನಡೆಸಲು ಸಾಧ್ಯವಿಲ್ಲದಂಥ ಸಂದರ್ಭಗಳಲ್ಲೂ ಸಂಗಾಮಿವ್ಯತ್ಯಯವಿಧಾನವನ್ನು ಅನುಸರಿಸಿ ಕಾರ್ಯಕಾರಣಸಂಬಂಧವನ್ನು ಖಚಿತವಾಗಿ ತಿಳಿಯಬಹುದು. ಆರ್ಯಪ್ರಮಾಣಕ್ಕೂ ಆರೋಗ್ಯಸೌಕರ್ಯಕ್ಕೂ ಇರುವ ಕಾರ್ಯಕಾರಣಸಂಬಂಧವನ್ನು ಪ್ರಯೋಗ ನಡೆಸಿ ನಿರ್ಧರಿಸುವುದು ಕಷ್ಟ. ಆದರೆ ಸಂಗಾಮಿವ್ಯತ್ಯಯ ವಿಧಾನದಿಂದ ಅದನ್ನು ನಿರ್ಧರಿಸಬಹುದು. ನಾವು ಜನನಮರಣ ಲೆಕ್ಕಗಳ ಮೂಲಕ 1950-1960ರವರೆಗಿನ ಹತ್ತು ವರ್ಷಗಳಲ್ಲಿ ಸರಾಸರಿ ಆಯುಃಪ್ರಮಾಣವೆಷ್ಟಿತ್ತು? 1940-1950ರಲ್ಲಿ, 1930-1940ರಲ್ಲಿ, 1920-1930ರಲ್ಲಿ ಎಷ್ಟಿತ್ತು ಎಂಬುದನ್ನು ತಿಳಿದುಕೊಳ್ಳಬಹುದು. ಸರ್ಕಾರಿದಾಖಲೆಗಳಿಂದ ಆಯಾ ಅವಧಿಗಳಲ್ಲಿ ಎಷ್ಟೆಷ್ಟು ಆಸ್ಪತ್ರೆಗಳಿದ್ದುವು ? ಎಷ್ಟು ಜನಕ್ಕೆ ದೇವಿಹಾಕಲಾಯಿತು? ಎಷ್ಟು ಜನಕ್ಕೆ ಕಾಲರ ಪ್ಲೇಗು ಮತ್ತು ಇನ್ನಿತರ ಜಾಡ್ಯಗಳಿಗೆ ತಡೆಯಾಗಿ ಚುಚ್ಚುಮದ್ದನ್ನು ಕೊಡಲಾಯಿತು ? ಎಂಬುದನ್ನೂ ತಿಳಿದುಕೊಳ್ಳಬಹುದು. ಆಯುಃ ಪ್ರಮಾಣವನ್ನು, ವೈದ್ಯಕೀಯ ಸೌಕರ್ಯದ ಪ್ರಮಾಣಕ್ಕೆ ಹೋಲಿಸಿದರೆ ಅವೆರಡಕ್ಕಿರುವ ಸಂಬಂಧವನ್ನು ನಿರ್ಧರಿಸಬಹುದು. ಹೀಗೆ ಕಾರ್ಯಕಾರಣಸಂಬಂಧವನ್ನು ಪ್ರಯೋಗಗಳ ನೆರವಿಲ್ಲದೆ ತಿಳಿಯಲು ಅನುಕೂಲವಾಗಿರುವುದು, ಸಂಗಾಮಿವ್ಯತ್ಯಯ ವಿಧಾನದ ಒಂದು ದೊಡ್ಡ ಗುಣ.
	
ಒಂದು ಸಂಕೀರ್ಣಘಟನೆಯ ಕೆಲವು ಪರಿಣಾಮಗಳಿಗೆ ಕೆಲವು ಅಂಶಗಳು ಕಾರಣವೆಂದು ಈ ಎಲ್ಲ ವಿಧಾನಗಳಿಂದ ತಿಳಿದ ಮೇಲೂ ಘಟನೆಯ ಒಂದು ಅಂಶದ ಕಾರಣ ತಿಳಿಯದೆ ಉಳಿಯಬಹುದು. ಶೇಷವಿಧಾನ ಉಳಿಕೆಯಾದ ಅಂಶಕ್ಕೆ ಕಾರಣ ಹುಡುಕಬೇಕೆಂದು ಸೂಚಿಸುತ್ತದೆ. ಆದರೆ ಅದೇ ಆ ಕಾರಣವನ್ನು ತಿಳಿಸುವುದಿಲ್ಲ. ಉಳಿದ ಕಾರಣವನ್ನು ತಿಳಿಯಲು ಕಲ್ಪನೆಯ ವಿಧಾನವನ್ನು ಉಪಯೋಗಿಸಿಕೊಳ್ಳ ಬೇಕಾಗುತ್ತದೆ. ಈ ಕಲ್ಪನೆಯ ಅಥವಾ ಊಹೆಯ ವಿಧಾನವನ್ನು ಮಿಲ್ ತಿಳಿದಿರಲಿಲ್ಲ. ಅವನು ಅದನ್ನು ವರ್ಣಿಸಿಯೂ ಇಲ್ಲ. ಕಲ್ಪನೆಯ ವಿಧಾನ ಹೀಗಿದೆ: ಪ್ರತಿಭೆಯಿಂದ ಊಹಿಸಿದ್ದನ್ನು ನಿಗಮನತರ್ಕದ ನೆರವಿನಿಂದ ಹೀಗಿದ್ದರೆ ಹೀಗಾಗುತ್ತದೆ ಎಂದು ತರ್ಕಮಾಡಿ ಕೆಲವು ಅನುಮಿತಿಗಳನ್ನು ಪಡೆಯುತ್ತೇವೆ. ಅನಂತರ ಅವೊಂದೊಂದನ್ನೂ ವಾಸ್ತವಕ್ಕೆ ಒರೆಹಚ್ಚಿ ಅವುಗಳಲ್ಲಿ ಯಾವ ಒಂದು ವಾಸ್ತವಕ್ಕೆ ಸಂಗತವಾಗುತ್ತದೋ ಅದನ್ನು ನಿಜವೆಂದು ಒಪ್ಪಿಕೊಳ್ಳುತ್ತೇವೆ.
	
ಶೇಷವಿಧಾನ ಹಾಗೂ ಕಲ್ಪನೆಯ ವಿಧಾನ-ಎರಡನ್ನೂ ಸ್ಪಷ್ಟಪಡಿಸುವ ದೃಷ್ಟಾಂತ ಇದು. ಬೇರೆ ಬೇರೆ ಸಂಯೋಗವಸ್ತುಗಳನ್ನು ವಿಭಜಿಸಿ ಪಡೆದ ಸಾರಜನಕದ ತೂಕ ಒಂದೇ ರೀತಿಯಾಗಿತ್ತು. ಆದರೆ ಗಾಳಿಯಿಂದ ಪಡೆದ ಸಾರಜನಕದ ತೂಕ ಇತರ ಪದಾರ್ಥಗಳಿಂದ ಪಡೆದ ಸಾರಜನಕದ ತೂಕಕ್ಕಿಂತ ಹೆಚ್ಚಾಗಿ ಕಂಡುಬಂತು. ಈ ಉಳಿಕೆಯ ತೂಕಕ್ಕೆ ಕಾರಣವೇನು ಎಂಬ ಸಮಸ್ಯೆ ಹುಟ್ಟಿತು! ಈ ಸಮಸ್ಯೆಯನ್ನು ಪರಿಹರಿಸಲು ಕಲ್ಪನೆಯ ವಿಧಾನವನ್ನು ಉಪಯೋಗಿಸಿಕೊಳ್ಳಲಾಯಿತು. ಗಾಳಿಯಿಂದ ಪಡೆದ ಸಾರಜನಕದ ತೂಕ ಹೆಚ್ಚಾಗಿದ್ದರೆ ಅದಕ್ಕೆ ಕಾರಣವಿರಬೇಕು. ಹಾಗೆ ಹೆಚ್ಚು ತೂಕವಿರಬೇಕಾದರೆ ಆ ಸಾರಜನಕದೊಡನೆ ಹೆಚ್ಚಿದ ತೂಕದ ಬೇರೊಂದು ಅನಿಲ ಬೆರಕೆಯಾಗಿರಬಹುದೆ ಎಂಬ ಊಹೆ ಹುಟ್ಟಿತು. ಈ ಊಹೆ ಸರಿಯೇ ತಪ್ಪೆ ? ಇದನ್ನು ನಿರ್ಧರಿಸುವುದು ಹೇಗೆ ? ಸಾರಜನಕವನ್ನು ಯಾವ ಬಗೆಯಿಂದಾದರೂ ವಿಶ್ಲೇಷಿಸಿ ಅದರೊಡನೆ ಬೆರಕೆಯಾದ ಅನಿಲವನ್ನು ಪ್ರತ್ಯೇಕಿಸಿ ತೂಗಿ ಅದರ ತೂಕ ಹೆಚ್ಚಿನದೆಂದು ಕಂಡುಬಂದರೆ ಆ ಊಹೆ ವಾಸ್ತವವಾಗುತ್ತದೆ. ಈ ಅನುಮಿತಿ ಕೇವಲ ಔಪಾಧಿಕವಾದದ್ದು. ವಾಸ್ತವಕ್ಕೆ ಸಂಗತವೆಂದು ತಿಳಿದಾಗ ಮಾತ್ರ ಇದು ನಿರುಪಾಧಿಕವಾಗುತ್ತದೆ. ವಾಸ್ತವಕ್ಕೆ ಸಂಗತವೆಂದು ನಿರ್ಧರಿಸಬೇಕಾದರೆ ಇಲ್ಲ ಅವೇಕ್ಷಣ ವಿಧಾನ ನಿರುಪಯೋಗಿ. ಎಷ್ಟೇ ಜಾಗರೂಕತೆಯಿಂದ ಪರೀಕ್ಷಿಸಿದರೂ ಆ ಅನಿಲ ಬೇರ್ಪಡುವುದಿಲ್ಲ. ಇಲ್ಲಿ ವಿಭಜನೆ ಅಗತ್ಯ. ಆ ವಿಭಜನೆಯೂ ಪ್ರಾಯೋಗಿಕವಾಗಿ ಯಂತ್ರಸೌಕರ್ಯದಿಂದಲೇ ನಡೆಯಬೇಕು. ಅಂಥದೊಂದು ವಿಧಾನವನ್ನು ಕಂಡುಹಿಡಿಯಲಾಯಿತು. ಇದಕ್ಕೆ ಸೋಸುವ (ಫಿಲ್ಟರ್) ವಿಧಾನವೆಂದು ಹೆಸರು. ಹೀಗೆ ಗಾಳಿಯನ್ನು ಸೋಸಿದಾಗ ಅದರ ಹೆಚ್ಚು ಭಾಗ ಸೋಸುವ ಮಾಧ್ಯಮದ ಮೂಲಕ ಹಾದುಹೋಯಿತು. ಸೋಸಿ ಹೋಗದ ಸ್ಪಲ್ಬಭಾಗ ಈಚೆಕಡೆ ಉಳಿದುಕೊಂಡಿತು. ಇಷ್ಟಕ್ಕೆ ಸಮಸ್ಯೆ ಪರಿಹಾರವಾಯಿತೆಂದು ತಿಳಿಯಕೂಡದು. ಸೋಸಿಬಂದ ಸಾರಜನಕದ ತೂಕವೂ ಸಂಯೋಜಿತವಸ್ತುಗಳಿಂದ ಪಡೆದ ಸಾರಜನಕದ ತೂಕವೂ ಒಂದೇ ಆಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಈ ಒಂದೊಂದನ್ನು ತೂಕಮಾಡಿ ಅವೆರಡೂ ತೂಕದಲ್ಲಿ ವಾಸ್ತವವಾದುವೆಂದು ನಿರ್ಧರಿಸಲಾಯಿತು. ಊಹೆ ಸ್ಥಿರಪಟ್ಟಿತು. ಈ ಹೆಚ್ಚಿನ ತೂಕದ ಅನಿಲಕ್ಕೆ ಆರ್ಗಾನ್ ಎಂದು ಹೆಸರಿಟ್ಟರು. ಇದು ಸಾರಜನಕಕ್ಕೆ ಹತ್ತಿರದ ಸಂಬಂಧಿಯಾದ ಅನಿಲವೆಂಬುದೂ ಸ್ಪಷ್ಟವಾಯಿತು. ಶೇಷವಿಧಾನ, ಕಲ್ಪನೆಯ ವಿಧಾನ, ವಿಶ್ಲೇಷಣ ವಿಧಾನ, ಪ್ರಾಯೋಗಿಕ ವಿಧಾನ, ನಿಗಮವಿಧಾನ-ಈ ಎಲ್ಲ ವಿಧಾನಗಳೂ ಸೇರಿ ತರ್ಕ ಹೇಗೆ ಪರಿಣಾಮಕಾರಿಯಾಗುತ್ತದೆಂಬುದು ಈ ಮೇಲಿನ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ.
	
ಅನುಗಮನತರ್ಕ ಈ ಎಲ್ಲ ವಿಧಾನಗಳಿಂದ ಮಾತ್ರ ಪೂರ್ಣಗೊಳ್ಳುವುದಿಲ್ಲ, ಅದನ್ನು ಪೂರ್ಣಗೊಳಿಸಲು ಈಚಿನಕಾಲದಲ್ಲಿ ಇನ್ನೆರಡು ವಿಧಾನಗಳನ್ನು ಬಳಸಲಾಗಿದೆ. ಇವುಗಳಲ್ಲಿ ಒಂದಕ್ಕೆ ಪರಿಣಾಮವಿಧಾನ (ಎವೆಲ್ಯೂಷನರಿ ಮೆಥಡ್): ಇನ್ನೊಂದಕ್ಕೆ ಬೆಳವಣಿಗಳ ಹೋಲಿಕೆಯ ವಿಧಾನ (ಕಂಪ್ಯಾರಿಟಿವ್ ಮೆಥಡ್) ಎಂದು ಹೆಸರು. ಇವೆರಡೂ ಒಂದೇ ವಿಧಾನದ ಎರಡು ಬಗೆಗಳು. ಇವು ವಿಶೇಷವಾಗಿ ಸಸ್ಯಶಾಸ್ತ್ರ. ಪ್ರಾಣಿಶಾಸ್ತ್ರ, ಭಾಷಾಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ಶಾಸ್ತ್ರಗಳಲ್ಲಿ ಉಪಯೋಗವಾಗಿವೆ. ಒಂದು ಅವ್ಯಕ್ತವಾದ ಮೂಲಾವಸ್ಥೆಯಿಂದ ವಿವಿಧಸಸ್ಯಗಳೂ ವಿವಿಧ ಪ್ರಾಣಿಗಳೂ ವಿವಿಧಭಾಷೆಗಳೂ ವಿವಿಧಸಾಮಾಜಿಕಸಂಸ್ಥೆಗಳೂ ಹೇಗೆ ಕ್ರಮಕ್ರಮವಾಗಿ ಬೆಳೆದಿವೆ ಎಂಬುದನ್ನು ಪರಿಣಾಮವಿಧಾನದಿಂದ ಕಾಣಬಹುದು.
	
ಈಚೆಗೆ ಹುಟ್ಟಿದ ಇನ್ನೊಂದು ಪದ್ಧತಿಗೆ ಸಂಖ್ಯಾಪದ್ಧತಿ (ಸ್ಟ್ಯಾಟಿಸ್ಟಿಕಲ್ ಮೆಥಡ್) ಎಂದು ಹೆಸರು. ತುಂಬ ಜಟಿಲವಾದ ಘಟನೆಗಳನ್ನು ಮಾನಸಿಕ ಮತ್ತು ಸಾಮಾಜಿಕ ಘಟನೆಗಳನ್ನು ಪ್ರಯೋಗವಿಧಾನದಿಂದ ಅಷ್ಟಾಗಿ ತಿಳಿಯಲಾಗುವುದಿಲ್ಲ ಇಂಥ ಸಂದರ್ಭದಲ್ಲಿ ಸಂಖ್ಯಾವಿಧಾನದ ಉಪಯೋಗ ಅತ್ಯಗತ್ಯವಾಗುತ್ತದೆ. ಇದು ಬೇಕನ್ ಅನುಸರಿಸಿದ ಸರಳ ಎಣಿಕೆಯ ಮಾರ್ಗದ್ದಾಗಿರದೆ ತುಂಬ ವ್ಯವಸ್ಥಿತವಾದ ಎಣಿಕೆಯ ವಿಧಾನವಾಗಿದೆ.
	
ಸಂಖ್ಯಾಸಂಗ್ರಹಣದ ಮೂಲಕ ಒಂದು ನಿಯಮವನ್ನು ಸ್ಥಾಪಿಸಬೇಕಾದರೆ ನಾಲ್ಕು ಹಂತಗಳಲ್ಲಿ ವಿಚಾರ ನಡೆಸಬೇಕಾಗುತ್ತದೆ.
	
1 ಒಂದು ಸಮಸ್ಯೆಗೆ ಸಂಬಂಧಪಟ್ಟ ವಿಷಯಗಳನ್ನು ಅಳೆದು ಎಣಿಸಿ ವರ್ಣಿಸಬೇಕು. ಸಮಸ್ಯೆ ತೆಂಗಿನಕಾಯಿಗೆ ಸಂಬಂಧಪಟ್ಟಿದ್ದರೆ, ಪರೀಕ್ಷೆಗಾಗಿ ಇಟ್ಟುಕೊಳ್ಳುವ ತೆಂಗಿನಕಾಯಿಗಳ ಸಂಖ್ಯೆ, ಗಾತ್ರ, ತೂಕ, ಎಷ್ಟೆಂಬುದನ್ನು ಸ್ಪಷ್ಟವಾಗಿ ವರ್ಣಿಸಬೇಕು. 2 ಆ ವರ್ಣನೆಯನ್ನು ಆಧಾರವಾಗಿಟ್ಟುಕೊಂಡು ತೆಂಗಿನಕಾಯಿಗಳನ್ನು ಗುಂಪು ಗುಂಪುಗಳಾಗಿ ವರ್ಗೀಕರಿಸಬೇಕು. 300 ಗ್ರಾಂ ತೂಕದವು. 400 ಗ್ರಾಂ ತೂಕದವು. ಆರಂಗುಲ, ಏಳಂಗುಲ, ಎಂಟಂಗುಲ, ಒಂಭತ್ತಂಗುಲ ವ್ಯಾಸವುಳ್ಳವು ಹೀಗೆ ವರ್ಗೀಕರಿಸಬಹುದು. 3 ವರ್ಗೀಕರಣಮಾಡಿದ ವಿಷಯಗಳು ಗೋಷ್ವಾರೆಯನ್ನು ತಿಳಿದುಕೊಳ್ಳಬೆಕು. ತೆಂಗಿನಕಾಯಿಗಳ ಗೋಷ್ವಾರೆ ತಿಳಿಯುವುದೆಂದರೆ ನೂರು ಕಾಯಿಗಳನ್ನು ವಿಚಾರಕ್ಕೆ ಆಧಾರ ಇಟ್ಟುಕೊಂಡಿದ್ದರೆ ಆ ತೆಂಗಿನಕಾಯಿಗಳ ಸರಾಸರಿ ಗಾತ್ರ, ತೂಕಗಳನ್ನು ನಿಶ್ಚಯಿಸಬೇಕು. 4 ವಿಷಯಗಳ ತಾತ್ಪರ್ಯ ತಿಳಿದಮೇಲೆ ಅವುಗಳಿಗಿರುವ ಸಂಬಂಧವನ್ನು ಕಂಡುಹಿಡಿಯುವುದು ಕೊನೆಯ ಹಂತ, ತೆಂಗಿನಕಾಯಿಯ ವ್ಯಾಸಕ್ಕೂ ಅದರ ತೂಕಕ್ಕೂ ಸಂಬಂಧವಿದೆಯೇ ಎಂಬುದನ್ನು ಕಂಡುಹಿಡಿದು, ಆ ಸಂಬಂಧವನ್ನು ಗಣಿತರೂಪದಲ್ಲಿ ಸೂತ್ರಿಸುವುದು. ಈ ಸಂಬಂಧಕ್ಕೆ ಸಾಹಚರ್ಯ (ಅಸೋಸಿಯೇಷನ್) ಸಂಬಂಧವೆಂದು ಹೆಸರು. ತೆಂಗಿನಕಾಯಿ ಗಾತ್ರಕ್ಕೂ, ತೂಕಕ್ಕೂ ಪೂರ್ಣಸಾಹಚರ್ಯವಿದ್ದರೆ ಆ ಸಾಹಚರ್ಯವನ್ನು 1 ಎಂಬ ಸೂತ್ರಚಿಹ್ನೆಯಿಂದ ಸಂಕೇತಿಸಬಹುದು. ಆ ಸಾಹಚರ್ಯ ಅಪೂರ್ಣವಾಗಿದ್ದರೆ 6 ಅಥವಾ 3 ಎಂಬ ಚಿಹ್ನೆಯಿಂದ ಸಂಕೇತಿಸಬಹುದು. ಈ ಸಾಹಚರ್ಯ ಎರಡು ಬಗೆಯಾಗಿರಬಹುದು. ಒಂದು ಭಾವಸಾಹಚರ್ಯ (ಪಾಸಿಟಿವ್ ಅಸೋಸಿಯೇಷನ್), ಎರಡು ಅಭಾವಸಾಹಚರ್ಯ (ನೆಗೆಟಿವ್ ಅಸೋಸಿಯೇಷನ್), ಪೂರ್ಣ ಭಾವಸಾಹಚರ್ಯದ ಸಂಕೇತ + 1, ಪೂರ್ಣ ಅಭಾವ ಸಾಹಚರ್ಯದ ಸಂಕೇತ-1. ಅಪೂರ್ಣಭಾವಸಾಹಚರ್ಯದ ಸಂಕೇತ 0.1 ರಿಂದ 0.9ರ ವರೆಗೆ ಯಾವುದಾದರೂ ಆಗಬಹುದು. ಅಪೂರ್ಣಾಭವಸಾಹಚರ್ಯದ ಸಂಕೇತ -1 ರಿಂದ -9ರವರೆಗೆ ಯಾವುದಾದರೂ ಆಗಬಹುದು.
	
ಇಂಥ ಸಾಹಚರ್ಯ ಪೂರ್ಣವಾಗಿರುವುದು ಅಸಂಭವ. ಸಂಖ್ಯಾವಿಧಾನದಿಂದ ನಿಶ್ಚಿತಸತ್ಯ ತಿಳಿಯುವುದಿಲ್ಲ. ಅದು ತಿಳಿಸುವುದು ಸಂಭವನೀಯ ಸತ್ಯವನ್ನು ಮಾತ್ರ. ಒಂದು ನಾಣ್ಯವನ್ನು ಹಾರಿಸಿದಾಗ ಅದರ ತಲೆ ಎಷ್ಟು ಸಲ ಮೇಲಾಗಿ ಬೀಳುತ್ತದೆ ಎಂಬುದನ್ನು ತಿಳಿಯಬೇಕಾದಾಗ ಕೇವಲ ಬೌದ್ಧಿಕವಾಗಿ ತರ್ಕದಿಂದ ಊಹಿಸುವುದಾದರೆ ನಾಣ್ಯವನ್ನು ಎರಡುಸಲ ಹಾರಿಸಿದಾಗ ಒಂದುಸಲ ತಲೆ ಮೇಲಾಗಿ ಬೀಳುತ್ತದೆಂದು ಊಹಿಸಬಹುದು. ಆದರೆ ವಾಸ್ತವವಾಗಿ ಎರಡುಸಲ ನಾಣ್ಯವನ್ನು ಹಾರಿಸಿದಾಗ ಎರಡುಸಲವೂ ತಲೆಮೇಲಾಗಿ ಬೀಳಬಹುದು. ಅಥವಾ ಎರಡುಸಲವೂ ತಲೆಕೆಳಗಾಗಿ ಬೀಳದಿರಬಹುದು, ಆದರೆ ಐದುನೂರು ಸಲ ಹಾರಿಸಿದಾಗ ಅವುಗಳ ಸರಾಸರಿ ಸಾಹಚರ್ಯ ದಷ್ಟು ಇರುತ್ತದೆ. ಇಲ್ಲಿನದು ಸರಾಸರಿ ಸತ್ಯ. ಆದ್ದರಿಂದ ಹೆಚ್ಚುಸಲ ಹಾರಿಸಿ ಸರಾಸರಿಯನ್ನು ನಿರ್ಧರಿಸಿದರೆ ಅದರ ಸಂಭವನೀಯತೆ ಹೆಚ್ಚು ನಿರ್ದಿಷ್ಟವಾಗುತ್ತದೆ.
	
ಈ ಎಲ್ಲ ಬಗೆಯ ಅನುಗಮನವಿಧಾನಗಳನ್ನೂ ತಿಳಿದುಕೊಂಡಮೇಲೆ ಮುಖ್ಯವಾಗಿ ಲಕ್ಷಿಸಬೇಕಾದ ತಾರ್ಕಿಕ ಸತ್ಯವೇನೆಂಬುದನ್ನು ನೋಡೋಣ. ತರ್ಕದಲ್ಲಿ ಅನುಗಮನ ಮತ್ತು ನಿಗಮನ ಎಂಬ ಭಾಗಗಳು ಒಂದಕ್ಕೊಂದು ಸೇರದೆ ಒಂದಕ್ಕೊಂದು ಪೋಷಕವಾಗದೆ ಇರಲಾರವು. ಸತ್ತ್ವಯುತವಾದ ಜೀವಂತವಾದ ನಮ್ಮ ಆಲೋಚನೆಯ ನಡೆ ಕೇವಲ ಒಮ್ಮುಖವಾದುದಲ್ಲ. ಅದರ ಗಮನ ಹಿಂದಕ್ಕೂ ಮುಂದಕ್ಕೂ ಹರಿಯುತ್ತದೆ; ಹಿಂದಿನದನ್ನು ಮುಂದಿನದಕ್ಕೂ ಮುಂದಿನದನ್ನು ಹಿಂದಿನದಕ್ಕೂ ಸೇರಿಸುತ್ತ ವ್ಯವಹರಿಸುತ್ತದೆ. ಅದಕ್ಕೆ ಹಿನ್ನೋಟ ಮುನ್ನೋಟಗಳು ಎರಡು ರೆಕ್ಕೆಗಳಿದ್ದಂತೆ. ಆ ಎರಡು ರೆಕ್ಕೆಗಳು ಸಮಸಮನಾಗಿ ಬಡಿದಾಗಲೆಲ್ಲ ಮೇಲೆ ಏರುವುದಕ್ಕೂ ಕೆಳಗೆ ಇಳಿಯುವುದಕ್ಕೂ ಸುತ್ತುವುದಕ್ಕೂ ಸಾಧ್ಯವಾಗುವುದು. ಸತ್ತ್ವಯುತವಾದ ಆಲೋಚನೆಯಲ್ಲಿ ಅನುಗಮನವೂ ನಿಗಮನವೂ ಪರಸ್ಪರವಾಗಿ ಸಹಕರಿಸಿ ಪರಸ್ಪರತೆಯಿಂದ ಪ್ರಬಲಗೊಳ್ಳುತ್ತವೆ.
(ನೋಡಿ- ನಿಗಮನ)									
	
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ